Tuesday, May 28, 2013

Bramhopadesham - Rahul 20th May 2013

ಉಪನಯನ (ವ್ರತಬಂಧ, ಮುಂಜಿ)

Article Source :
Original Post from: http://dharmagranth.blogspot.in/2012/12/upanayana.html
© Sanatan Sanstha - All Rights Reserved


 ವ್ಯಾಖ್ಯೆ ಮತ್ತು ಸಮಾನಾರ್ಥ ಶಬ್ದಗಳು 

೧. ಉಪನಯನ ಶಬ್ದದಲ್ಲಿ ‘ಉಪ’ ಮತ್ತು ‘ನಯನ’ ಈ ಎರಡು ಶಬ್ದಗಳಿವೆ. ‘ಉಪ’  ಶಬ್ದದ ಅರ್ಥ ‘ಹತ್ತಿರ’ ಮತ್ತು ‘ನಯನ’ ಶಬ್ದದ ಅರ್ಥ ‘ಕರೆದೊಯ್ಯುವುದು’, ಎಂದಾಗಿದೆ. ಉಪನಯನ ಶಬ್ದದ ಅರ್ಥವು, ‘ಗಾಯತ್ರಿಮಂತ್ರವನ್ನು ಕಲಿಯಲು ಗುರುಗಳ ಹತ್ತಿರ ಕರೆದೊಯ್ಯುವುದು’ ಎಂದಾಗಿದೆ. ನಯನ ಶಬ್ದದ ಅರ್ಥ ಕಣ್ಣು ಎಂದೂ ಆಗಿದೆ. ಉಪನಯನ ಎಂದರೆ ಅಂತಃಚಕ್ಷು. ಯಾವ ವಿಧಿಯಿಂದ ಅಂತಃಚಕ್ಷುಗಳು ತೆರೆಯಲು ಪ್ರಾರಂಭವಾಗುತ್ತವೆ ಅಥವಾ ತೆರೆಯಲು ಸಹಾಯವಾಗುತ್ತದೆ ಅಂತಹ ವಿಧಿಯನ್ನು ‘ಉಪನಯನ’ ಎನ್ನುತ್ತಾರೆ. 

೨. ವ್ರತಬಂಧವೆಂದರೆ ಯಾವ ವ್ರತದಿಂದ, ಧರ್ಮನಿಯಮದಿಂದ, ಬ್ರಹ್ಮಚರ್ಯದಿಂದ ನಡೆದುಕೊಳ್ಳುವ ಬಂಧನವನ್ನು ಹಾಕುತ್ತಾರೆಯೋ ಆ ವಿಧಿ. ಇದರ ಮೊದಲು ಬಾಲಕನು ಹೇಗೆ ಬೇಕಾದರೂ ವರ್ತಿಸಬಹುದು. ಅವನಿಗೆ ಯಾವ ಬಂಧನಗಳೂ ಇರುವುದಿಲ್ಲ. ಬ್ರಹ್ಮಚರ್ಯವೆಂದರೆ ಜ್ಞಾನಸ್ವರೂಪ ಸ್ವಸಂವೇದ್ಯ ಆತ್ಮ, ಅಂದರೆ ಬ್ರಹ್ಮ, ಇದರಲ್ಲಿ ಲೀನವಾಗುವುದು, ಆತ್ಮಸ್ವರೂಪವಾಗುವುದು. 

೩. ಉಪನಯನ ವಿಧಿಯಲ್ಲಿ ‘ಮುಂಜಿ’ ಎನ್ನುವ ಹೆಸರಿನ ಹುಲ್ಲನ್ನು ಸೊಂಟಕ್ಕೆ ಕಟ್ಟುತ್ತಾರೆ. ಆದುದರಿಂದ ಈ ವಿಧಿಯನ್ನು ‘ಮುಂಜಿ’ ಎಂದೂ ಕರೆಯುತ್ತಾರೆ. 

ಉಪನಯನವಾಗುವವನಿಗೆ ವಟು, ಬ್ರಹ್ಮಚಾರಿ ಇತ್ಯಾದಿ ಹೆಸರುಗಳಿವೆ. ಉಪನಯನ ಆಗಿರುವವನನ್ನು ಉಪನೀತ ಎನ್ನುತ್ತಾರೆ. 

ಉದ್ದೇಶ 

ಪ್ರತಿಯೊಬ್ಬ ಮನುಷ್ಯನು ಜನ್ಮತಃ ಶೂದ್ರನಾಗಿರುತ್ತಾನೆ; ಅಂದರೆ ಶರೀರವನ್ನು ಮಾತ್ರ ಶುಚಿಗೊಳಿಸಲು ಕಲಿಯುತ್ತಾನೆ. ಉಪನಯನ ಕರ್ಮವನ್ನು ಮಾಡಿ ಅವನು ದ್ವಿಜನಾಗುತ್ತಾನೆ. ‘ದ್ವಿ’ ಎಂದರೆ ಎರಡು ಮತ್ತು ‘ಜ’ ಎಂದರೆ ಜನ್ಮಕ್ಕೆ ಬರುವುದು. ಮುಂಜಿಯಲ್ಲಿನ ಸಂಸ್ಕಾರಗಳಿಂದ ಪುತ್ರನು ಒಂದು ವಿಧದಲ್ಲಿ ಎರಡನೆಯ ಜನ್ಮತಾಳಿದಂತೆಯೇ ಆಗುವುದರಿಂದ ಅವನಿಗೆ ‘ದ್ವಿಜ’ ಎನ್ನುತ್ತಾರೆ. ಬ್ರಹ್ಮಚಾರಿಯ ಎರಡನೆಯ ಜನ್ಮವು (ಬ್ರಹ್ಮಜನ್ಮವು) ಮೌಂಜೀ ಬಂಧನದಿಂದ ಗುರುತಿಸಲ್ಪಡುತ್ತ್ತದೆ. ಮುಂಜಮೇಖಲಾಧಾರಣವು (ಮುಂಜೆಹುಲ್ಲಿನ ಉಡುದಾರ) ಇದರ ಪ್ರತೀಕವಾಗಿರುತ್ತದೆ. ಈ ಜನ್ಮದಲ್ಲಿ ಸಾವಿತ್ರಿಯು ಅವನ ತಾಯಿ ಮತ್ತು ಆಚಾರ್ಯನು ಅವನ ತಂದೆ ಎಂದು ಅವನಿಗೆ ಹೇಳುತ್ತಾರೆ (ಮನುಸ್ಮೃತಿ, ಅಧ್ಯಾಯ ೨, ಶ್ಲೋಕ ೧೭೦). ದ್ವಿಜನಾದಾಗ ಆ ವ್ಯಕ್ತಿಯು ಗಾಯತ್ರಿಮಂತ್ರಕ್ಕೆ ಅರ್ಹನಾಗುತ್ತಾನೆ, ಅಂದರೆ ಸಾಧನೆಗೆ ಅರ್ಹನಾಗುತ್ತಾನೆ. ಆದುದರಿಂದ ಮುಂಜಿಯನ್ನು ಮಾಡಬೇಕು. ಆದರೆ ವಿವಾಹವನ್ನು ಮಾಡಬೇಕು ಎಂದೇನಿಲ್ಲ. 

ಶಿಖೆ (ಜುಟ್ಟು) ಮತ್ತು ಸೂತ್ರ (ಯಜ್ಞೋಪವೀತ) 

ಇವುಗಳ ಮಹತ್ವ ‘ಶಿಖಾ-ಸೂತ್ರ ಇವು ಹಿಂದೂಗಳ ಲಕ್ಷಣವಾಗಿವೆ, ಆದರೆ ಅವು ಗೌಣವಾಗಿವೆ. ಏಕೆಂದರೆ ಇಷ್ಟರಿಂದಲೇ ಧರ್ಮವನ್ನು ನಿರ್ಧರಿಸಲು ಆಗುವುದಿಲ್ಲ. ಸನಾತನ ಹಿಂದೂ ಧರ್ಮವು ಸರ್ವವ್ಯಾಪಿಯಾಗಿದೆ. ಶಿಖಾ-ಸೂತ್ರ ಇವು ಸಣ್ಣಪುಟ್ಟ ಬಾಹ್ಯ ಲಕ್ಷಣಗಳಾಗಿವೆ. ಅವುಗಳನ್ನೇ ಧರ್ಮವೆಂದು ತಿಳಿದುಕೊಳ್ಳುವುದು ಮೂರ್ಖತನವಾಗಿದೆ. ಆದರೆ ಶಿಖಾ-ಸೂತ್ರ ಇವು ಹಿಂದೂ ಸಂಸ್ಕೃತಿಯ ಪ್ರಾಣವಾಗಿವೆ. ಶಿಖಾ-ಸೂತ್ರವಿಲ್ಲದೇ ಯಾವುದೇ ಧರ್ಮಕಾರ್ಯವನ್ನು ಮಾಡಲು ಬರುವುದಿಲ್ಲ. ವೇದಗಳಲ್ಲಿ ೮೦ ಸಹಸ್ರ ಕರ್ಮಕಾಂಡಬೋಧಕ (ಕರ್ಮಕಾಂಡವನ್ನು ಬೋಧಿಸುವ) ವಚನಗಳಿವೆ ಮತ್ತು ೧೬ ಸಹಸ್ರ ಉಪಾಸನಾಬೋಧಕ ಮಂತ್ರಗಳಿವೆ. ಸಂನ್ಯಾಸಿಗೂ ಜ್ಞಾನಮಯೀ ಶಿಖೆಯಿದೆ. ದಂಡಗತಮುದ್ರೆಯೇ ಅವರ ಸೂತ್ರ (ಯಜ್ಞೋಪವೀತ) ವಾಗಿದೆ.’ - ಗುರುದೇವ ಡಾ.ಕಾಟೇಸ್ವಾಮೀಜಿ 

ಯಜ್ಞೋಪವೀತಧಾರಣೆ 

ಯಜ್ಞೋಪವೀತವನ್ನು (ಬ್ರಹ್ಮಸೂತ್ರ, ಜನಿವಾರವನ್ನು) ಕೈಯಲ್ಲಿ ತೆಗೆದುಕೊಂಡು ಹತ್ತು ಬಾರಿ ಗಾಯತ್ರಿ ಮಂತ್ರವನ್ನು ಪಠಿಸಿ ಅಭಿಮಂತ್ರಿಸಿದ ನೀರನ್ನು ಅದರ ಮೇಲೆ ಸಿಂಪಡಿಸಬೇಕು. ಇದರಿಂದ ಅದರಲ್ಲಿ ತೇಜತತ್ತ್ವವು ಬರುತ್ತದೆ. ನಂತರ ಅದನ್ನು ಕುಮಾರನಿಗೆ ಧರಿಸಲು ಕೊಡಬೇಕು.

 ‘ಯಜ್ಞೋಪವೀತ’ ಈ ಶಬ್ದವು ‘ಯಜ್ಞ’ + ‘ಉಪವೀತ’ ಈ ಎರಡು ಶಬ್ದಗಳಿಂದ ಆಗಿದೆ. ವೀತ ಎಂದರೆ ನೇಯ್ದದ್ದು, ಎಂದರೆ ವಸ್ತ್ರ. ಉಪವೀತ ಎಂದರೆ ಉಪವಸ್ತ್ರ. ಮಗುವು ಜನ್ಮಕ್ಕೆ ಬಂದಾಗ ವಸ್ತ್ರವು ಇರುವುದಿಲ್ಲ. ಮುಂದೆ ಆ ಮಗುವು ಏಕವಸ್ತ್ರವಾಗುತ್ತದೆ, ಎಂದರೆ ಅದನ್ನು ಒಂದು ವಸ್ತ್ರದಲ್ಲಿ ಸುತ್ತಿಡುತ್ತಾರೆ. ಮುಂಜಿಯವರೆಗೂ ಒಂದೇ ವಸ್ತ್ರವು ಸಾಕಾಗುತ್ತದೆ. ಮುಂಜಿಯಾದ ನಂತರ ಉಪವಸ್ತ್ರದ ಉಪಯೋಗವು ಪ್ರಾರಂಭವಾಗುತ್ತದೆ. ಮುಂಜಿಯಾದ ನಂತರ ಕೌಪೀನವು ಒಂದು ವಸ್ತ್ರವಾದರೆ, ಜನಿವಾರವು ಎರಡನೆಯ ವಸ್ತ್ರವಾಗಿದೆ. ಜನಿವಾರವು, ಒಂದು ವಿಧದಲ್ಲಿ ಶಲ್ಯದ (ಶಾಲು) ಸಂಕ್ಷಿಪ್ತ ರೂಪವೇ ಆಗಿದೆ. ಮೌಂಜೀಬಂಧನದ ಸಮಯದಲ್ಲಿ ಧರಿಸಬೇಕಾದ ಜನಿವಾರವನ್ನು ರೇಷ್ಮೆ, ಪುಂಡಿಯ ನಾರು, ಮರದ ತೊಗಟೆ ಮತ್ತು ಹುಲ್ಲು ಇತ್ಯಾದಿಗಳಿಂದ ತಯಾರಿಸುತ್ತಾರೆ. (ಯಜ್ಞೋಪವೀತವನ್ನು ಹೇಗೆ ತಯಾರಿಸಿರುತ್ತಾರೆ ಮತ್ತು ಇತರ ವಿಧಿಯ ವಿವರವಾದ ಮಾಹಿತಿಗಳನ್ನು ಗ್ರಂಥದಲ್ಲಿ ಕೊಡಲಾಗಿದೆ.) 

ವಿಶೇಷ ಸೂಚನೆ : ಇಲ್ಲಿನ ಉಪನಯನದ ವಿಷಯಗಳನ್ನು ಅನೇಕರು ಉಪನಯನದ ಆಮಂತ್ರಣ ಪತ್ರಿಕೆಯಲ್ಲಿ ಖಾಲಿ ಜಾಗದಲ್ಲಿ ಮುದ್ರಿಸಿದ್ದಾರೆ. ತಾವೂ ಸಹ ತಮ್ಮ ಅಥವಾ ಬಂಧು-ಮಿತ್ರರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಇಂತಹ ವಿಷಯಗಳನ್ನು ಹಾಕಬಹುದು ಮತ್ತು ಸಲಹೆ ಕೊಡಬಹುದು. ಇದರಿಂದ ಎಲ್ಲರಿಗೂ ಜ್ಞಾನದಾನ ಮಾಡುವಂತಹ ಶ್ರೇಷ್ಠ ಕಾರ್ಯ ಮಾಡಿದಂತಾಗಿ ನಮಗೆ ಈಶ್ವರನ ಆಶೀರ್ವಾದ ಸಿಗುತ್ತದೆ ಮತ್ತು ಎಲ್ಲರಿಗೂ ನಮ್ಮ ಹಿಂದೂ ಧರ್ಮದ ಶ್ರೇಷ್ಠತೆ ತಿಳಿಯುತ್ತದೆ. ಈ ವಿಷಯಗಳನ್ನು ಹಾಕುವುದಿದ್ದರೆ ಕೊನೆಯಲ್ಲಿ ಆಧಾರಗ್ರಂಥದ ಹೆಸರನ್ನು ಹಾಕಬೇಕಾಗಿ ವಿನಂತಿ. ಏಕೆಂದರೆ ಇದರಿಂದ ಜನರಿಗೆ ಈ ವಿಷಯದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಯಾವ ಗ್ರಂಥದಲ್ಲಿ ಸಿಗುತ್ತದೆ ಎಂದು ಅವರಿಗೆ ತಿಳಿಯುತ್ತದೆ. 
(ಆಧಾರ : ಸನಾತನ ಸಂಸ್ಥೆಯ ಗ್ರಂಥ 'ಹದಿನಾರು ಸಂಸ್ಕಾರಗಳು') : 

ಗಾಯತ್ರಿ ಮಂತ್ರ :
 ಓಂ ಭೂರ್ಭುವಃ ಸ್ವಃ | ತತ್ಸವಿತುರ್ವರೇಣ್ಯಂ | 
 ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ ||






























No comments:

Post a Comment